ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ವಾರ್ಷಿಕೋತ್ಸವ
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇದರ 2ನೇ ದಿನದ ವಾರ್ಷಿಕೋತ್ಸವವು ಡಿಸೆಂಬರ್ 12ರಂದು ಯಾದವಶ್ರೀ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ, ಕರ್ನಾಟಕ ಇದರ ಕಾರ್ಯವಾಹ ಡಾ. ಜಯ ಪ್ರಕಾಶ್, ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ಸ್ಥಾಪಕರಾಗಿರುವ ಡಾ.ಶ್ರೀಶ ಭಟ್, ಸಾಕ್ಷರತಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇದರ ಜಿಲ್ಲಾ ಉಪನಿರ್ದೇಶಕರು(ಆಡಳಿತ) ಡಾ. ಶಶಿಧರ್ ಜಿ .ಎಸ್, K.E.S, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಕಾರ್ಯದರ್ಶಿ ಡಾ. ಕೆ ಎಂ ಕೃಷ್ಣ ಭಟ್ ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾಗಿರುವ ಡಾ. ಶಶಿಧರ್ ಜಿ ಎಸ್, K.E.S, ಮಾತನಾಡಿ, ವಿದ್ಯಾರ್ಥಿಗಳು ವಿವೇಕಾನಂದ ಎನ್ನುವ ವಿಶಾಲವಾದ ಶೈಕ್ಷಣಿಕ ವ್ಯವಸ್ಥೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸುಭದ್ರವಾದ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ವಿವೇಕಾನಂದ ಸಂಸ್ಥೆಯು ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರವನ್ನು ಬೆಳೆಸುವ ಮಹತ್ತರ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿರುವುದು ಶಿಕ್ಷಣಕ್ಷೇತ್ರ ಹಾಗೂ ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಇದು ಎಲ್ಲಾ ಶಿಕ್ಷಣ ಸಂಸ್ಥೆಗಳ ಗುರಿಯಾಗಿರಲಿ. ಗುರು ಪರಂಪರೆ, ಇತಿಹಾಸ ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಭಾರತೀಯರ ಸಾಧನೆಗೆ ಬಗ್ಗೆ ಸವಿವರವಾಗಿ ವಿಷಯಗಳನ್ನು ಪ್ರಸ್ತುತ ಪಡಿಸಿದರು.
ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಕರ್ನಾಟಕ ಇದರ ಕಾರ್ಯವಾಹ ಡಾ. ಜಯಪ್ರಕಾಶ್ ಅವರು ಮಾತನಾಡಿ ಯುವ ಜನಾಂಗ ಜವಾಬ್ದಾರಿಯುತವಾಗಿ ಕಾರ್ಯ ಪ್ರವೃತ್ತರಾದಾಗ ಭಾರತ ಸದೃಢವಾಗಲು ಸಾಧ್ಯ. ಕುಟುಂಬ ಪ್ರಬೋಧನ್, ಸ್ವದೇಶಿ, ಸಾಮರಸ್ಯ, ಪರಿಸರ ಸಂರಕ್ಷಣೆ, ನಾಗರಿಕ ಕರ್ತವ್ಯಗಳ ಬಗ್ಗೆ ಸ್ಪಷ್ಟ ಕಲ್ಪನೆ ಇರಬೇಕು ಎಂದರು.
ಮುಖ್ಯ ಅತಿಥಿ ಶಾಲಾ ಹಳೆ ವಿದ್ಯಾರ್ಥಿ ಹಾಗೂ ಆಕಾಂಕ್ಷ ಫೌಂಡೇಶನ್ ಪುತ್ತೂರಿನ ಸ್ಥಾಪಕರಾಗಿರುವ ಡಾ. ಶ್ರೀಶ ಭಟ್ ಮಾತನಾಡಿ ಸಮೂಹ ಮಾಧ್ಯಮಗಳ ಸರಿಯಾದ ಬಳಕೆ ಮತ್ತು ಪೋಷಕರು ಮಕ್ಕಳಿಗಾಗಿ ಸಮಯ ಮೀಸಲಿಟ್ಟು ಅವರ ಭಾವನೆಗಳಿಗೆ ಸ್ಪಂದಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವುದಕ್ಕಾಗಿ, ಸಮಾಜ, ಪೋಷಕರು, ಸಂಘ ಸಂಸ್ಥೆಗಳ ಅಧಿಕಾರಿ ವರ್ಗ, ಆಡಳಿತ ಸಮೂಹವನ್ನು ಅಧ್ಯಾಪಕರ ಶ್ರಮದೊಂದಿಗೆ ಕೈ ಜೋಡಿಸುವಂತೆ ಮಾಡಿದ ವಿಶಿಷ್ಟ ಯೋಚನೆ ಮಿಷನ್ 95 ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕರಾದ ಡಾ. ಶಶಿಧರ.ಜಿ .ಎಸ್., K.E.S, ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಪಠ್ಯ, ಕ್ರೀಡೆ ,ಕಲೆ, ವಿಜ್ಞಾನ , ಕಬ್ಸ್ , ಗೈಡ್ಸ್ ವಿಭಾಗದಲ್ಲಿ ಸಾಧಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ಪೋಷಕರಿಗೆ ಆಯೋಜಿಸಿದ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೆ ಎಂ ಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಪಠ್ಯದ ಜೊತೆಗೆ ವಿದ್ಯಾರ್ಥಿಗಳಲ್ಲಿ ಉತ್ತಮ ಸದ್ವಿಚಾರಗಳಾದ ಸಾಹಸ ,ತ್ಯಾಗ, ಶೀಲ, ಮುಂತಾದವುಗಳನ್ನು ಹೃದಯದಲ್ಲಿ ತುಂಬಿಸಿ, ಲವ, ಕುಶ ಪ್ರಹ್ಲಾದ, ಸೀತೆ ಸಾವಿತ್ರಿ ಯರಂತಹ ಮಹಾನ್ ಚೇತನಗಳನ್ನಾಗಿ ಮಾಡುವ ಮಹತ್ವದ ಕಾರ್ಯವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಮಾಡುತ್ತಾ ಬಂದಿದೆ ಎಂದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಶಿವಪ್ರಕಾಶ್ ಎಂ, ಸಂಚಾಲಕ ರವಿ ನಾರಾಯಣ ಎಂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಭಾಸ್ಕರ್ ಬಲ್ಯಾಯ, ಸಂಸ್ಥೆಯ ಮುಖ್ಯೋಪಾಧ್ಯಾಯರುಗಳು, ಶಾಲಾ ನಾಯಕರು ಉಪಸ್ಥಿತರಿದ್ದರು. ಶಾಲಾ ಆಡಳಿತ ಮಂಡಳಿ ಸಂಚಾಲಕ ರವಿನಾರಾಯಣ.ಎಂ ಸ್ವಾಗತಿಸಿ, ಕೋಶಾಧಿಕಾರಿ ಕೃಷ್ಣ ಮೋಹನ್ ವಂದಿಸಿದರು. ಶಿಕ್ಷಕರಾದ ಸೌಮ್ಯಾಕುಮಾರಿ, ರಾಧಾಕೃಷ್ಣ ರೈ ಹಾಗೂ ವಿದ್ಯಾರ್ಥಿಗಳಾದ ಸಾನ್ವಿ ಚನಿಲ ಮತ್ತು ಆಕಾಂಕ್ಷ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.