ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಲಯನ್ಸ್ ಕ್ವೆಸ್ಟ್ S. F. A ತರಗತಿಗಳ ಉದ್ಘಾಟನಾ ಕಾರ್ಯಕ್ರಮ:
ಪುತ್ತೂರು ಲಯನ್ ಇಂಟರ್ನ್ಯಾಷನಲ್, ಜಿಲ್ಲೆ 317D ಇದರ ಲಯನ್ಸ್ ಕ್ಲಬ್ ಪುತ್ತೂರು, ಕಾವು ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ಲಯನ್ಸ್ ಕ್ವೆಸ್ಟ್ S.F.A (Skills For Adolescence) ತರಗತಿಗಳ ಉದ್ಘಾಟನಾ ಕಾರ್ಯಕ್ರಮವು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿತು.
ಈ ಕಾರ್ಯಕ್ರಮದ ಉದ್ಘಾಟನಾ ಸಭೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ರೈ - ಮುಖ್ಯ ಗುರುಗಳು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಉದ್ಘಾಟಕರಾದ ಶ್ರೀಮತಿ ಮಂದಾಕಿನಿ ಉಪಾಧ್ಯಾಯ- ಜಿಲ್ಲಾ ಮುಖ್ಯ ಸಂಯೋಜಕರು ಲಯನ್ಸ್ ಕ್ವೆಸ್ಟ್, ಅತಿಥಿಗಳಾಗಿ ಶ್ರೀ ಇಬ್ರಾಹಿಂ ಹಾಜಿ ಅಧ್ಯಕ್ಷರು ಲಯನ್ಸ್ ಕ್ಲಬ್ ಪುತ್ತೂರು ಕಾವು, ಶ್ರೀಮತಿ ರೂಪ ಶ್ರೀ ಜೆ ರೈ- ಜಿಲ್ಲಾಧ್ಯಕ್ಷರು ಲಯನ್ಸ್ ಕ್ವೆಸ್ಟ್ ದಕ್ಷಿಣ ಕನ್ನಡ ಜಿಲ್ಲೆ, ಕಾರ್ಯಕ್ರಮದ ಸಂಯೋಜಕರಾದ ಶ್ರೀ ಪಾವನರಾಮ- ಸದಸ್ಯರು ಲಯನ್ಸ್ ಕ್ಲಬ್ ಪುತ್ತೂರು, ಲಯನ್ ಶ್ರೀ ಮೋಹನದಾಸ ಶೆಟ್ಟಿ ಹಾಗೂ ಲಯನ್ ಶ್ರೀ ರಮೇಶ್ ರೈ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಮಂದಾಕಿನಿ ಉಪಾಧ್ಯಾಯ ಅವರು ಹದಿಹರೆಯದ ವಯಸ್ಸಿನಲ್ಲಾಗುವ ಮಾನಸಿಕ ತೊಳಲಾಟವನ್ನು ನಿಭಾಯಿಸಿಕೊಳ್ಳಲು ಬೇಕಾದ ಸಾಮರ್ಥ್ಯ, ಸಾಮಾಜಿಕ ಒತ್ತಡ ನಿರ್ವಹಣೆ, ಸ್ನೇಹಿತರ ನಕಾರಾತ್ಮಕ ಪ್ರಭಾವ ಮುಂತಾದ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳುವ ಹಾದಿಯನ್ನು S.F.A ತರಗತಿಗಳು ನೀಡಲು ಶಕ್ತವಾಗಿವೆ ಎಂದು ತಮ್ಮ ಉದ್ಘಾಟನಾ ನುಡಿಯಲ್ಲಿ ಹೇಳಿದರು. ವಿದ್ಯಾರ್ಥಿ ಜೀವನದ ಪ್ರೌಢ ಹಂತದಲ್ಲಿ ಮೈಗೂಡಿಸಿಕೊಳ್ಳುವ ಸದ್ವಿಚಾರವು ಸ್ವಾಸ್ಥ್ಯ ಸಮಾಜದ ತಳಹದಿ ಎಂದು ಶ್ರೀ ಇಬ್ರಾಹಿಂ ಹಾಜಿ ಅವರು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸತೀಶ್ ಕುಮಾರ್ ರೈ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಮುಂಬರುವ ದಿನಗಳಲ್ಲಿ ಎಸ್ಎಫ್ಎ ತರಗತಿಗಳು ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬರಲಿ ಹಾಗೂ ವಿದ್ಯಾರ್ಥಿಗಳು ಇದರ ಹೆಚ್ಚಿನ ಪ್ರಯೋಜನವನ್ನು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಲಯನ್ಸ್ ಕ್ವೆಸ್ಟ್ ವತಿಯಿಂದ ನೀಡಲ್ಪಡುವ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಶ್ರೀಮತಿ ರೇಖಾ ಆಚಾರ್ಯ ಅವರು ಸ್ವಾಗತಿಸಿ, ಶ್ರೀಮತಿ ದೀಪ್ತಿ ಆರ್ ಭಟ್ ವಂದಿಸಿ, ಶ್ರೀಮತಿ ಲತಾ ಕುಮಾರಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.