ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ದಕ್ಷಿಣ ಮಧ್ಯ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆ:
ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಮಟ್ಟದ ಗಣಿತ - ವಿಜ್ಞಾನ ಮೇಳ, ಸಂಸ್ಕೃತಿ ಮಹೋತ್ಸವವು ಬಾಲ ಭಾರತಿ ಕೇಂದ್ರೀಯ ವಿದ್ಯಾಲಯದ ಆವರಣ ಬಳ್ಳಾರಿ ಇಲ್ಲಿ 04/09/2026 ರಿಂದ 06/09/2026ರವರೆಗೆ ನಡೆದಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.
ಬಾಲ ವರ್ಗದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ‘ವಿದ್ಯುತ್ ಶಕ್ತಿ ಸಂರಕ್ಷಣೆ’ ಎಂಬ ವಿಷಯದಲ್ಲಿ 7ನೇ ತರಗತಿಯ ವಿಹಾನ್ ಆರ್ ಕೆ (ಶ್ರೀ ರಾಜೇಶ್ ಕೆ ಮತ್ತು ಶ್ರೀಮತಿ ಅಕ್ಷತಾ ಎ ಪಿ ದಂಪತಿ ಪುತ್ರ) ತೃತೀಯ ಸ್ಥಾನ, ಕಿಶೋರ ವರ್ಗದ ‘ಗಣಿತ ಪತ್ರವಾಚನ’ ಸ್ಪರ್ಧೆಯಲ್ಲಿ 10ನೇ ತರಗತಿಯ ಅತೀತ್ ಹೆಚ್ ರೈ ( ಶ್ರೀ ಹರೀಶ್ ರೈ ಪಿ ಮತ್ತು ಶ್ರೀಮತಿ ಜಲಜ ಹೆಚ್ ರೈ ದಂಪತಿ ಪುತ್ರ) ತೃತೀಯ ಸ್ಥಾನ, ಕಿಶೋರ್ವರ್ಗದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ‘ಸೆನ್ಸಾರ್ ವಿಜ್ಞಾನ ಮಾದರಿ’ ಎಂಬ ವಿಷಯದಲ್ಲಿ 10ನೇ ತರಗತಿಯ ಕ್ಷಮೇತ್ ಜೈನ್ ( ಶ್ರೀ ಹನೀಶ್ ಕುಮಾರ್ ಮತ್ತು ಶ್ರೀಮತಿ ಶ್ರುತಿ ಕುಮಾರಿ ವೈ ದಂಪತಿ ಪುತ್ರ) ಪ್ರಥಮ ಸ್ಥಾನ ಪಡೆದಿರುತ್ತಾರೆ.
ಈ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ 10 ನೇ ತರಗತಿಯ ಕ್ಷಮೇತ್ ಜೈನ್ ಅಕ್ಟೋಬರ್ 2 ರಿಂದ 4ನೇ ತಾರೀಕಿನವರೆಗೆ ಆಂಧ್ರಪ್ರದೇಶದಲ್ಲಿ ನಡೆಯಲಿರುವ ದಕ್ಷಿಣ ಮಧ್ಯ ಕ್ಷೇತ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.